ತಿರುಪತಿಯಲ್ಲಿ ನೆಲೆಸಿರುವ ಏಳು ಬೆಟ್ಟಗಳ ಒಡೆಯನ ದರುಶನ ಭಕ್ತ ಬದುಕಿನ ಬಹುದೊಡ್ಡ ಸಾರ್ಥಕತೆ. ಯಾತ್ರಾ ಸ್ಥಳವಾಗಿರುವುದರಿಂದ ಅಲ್ಲಿ ಭಾಷೆ ಸಮಸ್ಯೆ ಆಗದು. ಅಲ್ಲಿ ನಮ್ಮದೇ ಭಾಷೆ ಇದ್ದರೂ ಅದು ಅರ್ಥವಾಗುವವರಿಗೆ ಮಾತ್ರ ತಿಳಿಯುತ್ತದೆ. ಅದಕ್ಕೆ ಉದಾಹರಣೆ ಈ ಬೋರ್ಡ್ :-).. ಆ ವಿಷಯ ಪಕ್ಕಕ್ಕೆ ಇಡೋಣ,
ಈಗ ಹೇಳ ಹೊರಟಿರುವ ಸಂಗತಿ ಏನೆಂದರೆ,
ಶ್ರೀನಿವಾಸ, ಬಾಲಾಜಿ, ವೆಂಕಟರಮಣ ದೇವನಿಗೆ- ಅಮ್ಮನವರಿಗೆ ತಿರುಪತಿಯಲ್ಲಿ ನಡೆಯುವ ಹಾಗೂ ಅಮ್ಮನವರು ನೆಲೆ ನಿಂತಿರುವ ತಿರುಚಾಯನೂರಿನಲ್ಲಿ ನಡೆಯುವ ಭಗವದ್ ಕಾರ್ಯಕ್ರಮಗಳು ಮಾತ್ರವಲ್ಲ ಸ್ಥಳೀಯ ಮತ್ತು ಕರ್ನಾಟಕ, ತಮಿಳು ನಾಡಿನ ದೇವಳಗಳಲ್ಲಿ ನಡೆಯುವ ದೇವತಾ ಕೆಲಸಗಳನ್ನು ವೀಕ್ಷಕರ ಬಳಿ ತರುವ ಮಹೋನ್ನತ ಕೆಲಸವನ್ನು ಎಸ್ವಿಬಿಸಿ (Sri Venkateswara Bhakti Channel)ವಾಹಿನಿ ಮಾಡುತ್ತಿದೆ. ಜೊತೆಗೆ ಭಜನೆ, ಶಾಸ್ತ್ರೀಯ ಸಂಗೀತ, ಪ್ರವಚನದಂತಹ ಕಾರ್ಯಕ್ರಮಗಳಿಂದ ಸಹಿತ ವೀಕ್ಷಕರನ್ನು ಆಕರ್ಷಿಸಿದೆ. ಅನ್ನಮಯ್ಯ ಪಾಟಕು ಪಟ್ಟಾಭಿಷೇಕಂ ಎನ್ನುವ ಹೆಸರಿನ ಹಾಡಿನ ರಿಯಾಲಿಟಿ ಷೋ ಎಸ್ವಿಬಿಸಿ ವಾಹಿನಿಯಲ್ಲಿ ಪ್ರಸಾರವಾಗ್ತಾಯಿದೆ. ವಾಗ್ಗೇಯಕಾರ ಅನ್ನಮಯ್ಯ ಅವರ ರಚನೆಗಳು ಕೇಳಲು ಬಲು ಇಂಪು. ಅವರ ಸಮಕಾಲೀನರಾದ ಕರ್ನಾಟಕದ ಶ್ರೀಪಾದ ರಾಯರ (ರಾಜರು) ರಚನೆಗಳು ಸಹಿತ ತುಂಬಾ ಚಂದ ಚಂದ. ಕರ್ನಾಟಕದಲ್ಲಿ ಶ್ರೀಪಾದರಾಜರ ರಚನೆಗಳ ಕುರಿತಾದ ರಿಯಾಲಿಟಿ ಷೋ ಆರಂಭವಾಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ತೆಲುಗು ಭಾಷಿಗರು ಆ ಕೆಲಸವನ್ನು ಮಾಡಿದ್ದಾರೆ. ಅನ್ನಮಯ್ಯನವರ ರಚನೆಯನ್ನು ಇಂತಹ ರಿಯಾಲಿಟಿ ಶೋಗಳ ಮೂಲಕ ಟಿಟಿಡಿ ( ಎಸ್ವಿಬಿಸಿ ) ಚಾನೆಲ್ ಯಶಸ್ವಿಯಾಗಿ ಸಂಗೀತಾಸಕ್ತರ ಮುಂದಿಡುತ್ತಿದ್ದಾರೆ.ಟಿಟಿಡಿ ಟ್ರಸ್ಟ್ ಬೋರ್ಡ್ನ ಸದಸ್ಯರಾಗಿರುವ ಪ್ರಸಿದ್ಧ ಸಿನಿಮಾ ನಿರ್ದೇಶಕ ಡಾ. ರಾಘವೇಂದ್ರ ರಾವು ಅವರು ಈ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ.
No comments:
Post a Comment