ಅನೇಕ ವಾರಗಳಿಂದ ಬ್ಲಾಗ್ ಕಡೆ ಬರಲು ಸಾಧ್ಯವಾಗಲೇ ಇಲ್ಲ. ಅದಕ್ಕೆ ಕಾರಣಗಳು ಹಲವಾರಿದ್ದರು, ಬರಲಾಗಲಿಲ್ಲ ಎನ್ನುವುದು ಸತ್ಯ. ಸಾಮಾನ್ಯವಾಗಿ ಎಲ್ಲಾ ವಾಹಿನಿಗಳು, ಅಂದರೆ ಕನ್ನಡ ಸೇರಿದಂತೆ ಬೇರೆ ಭಾಷೆಯ ವಾಹಿನಿಗಳನ್ನು ವೀಕ್ಷಿಸುವಾಗ, ಅದಕ್ಕೆ ಸಂಬಂಧಪಟ್ಟಂತೆ ಬರೆಯುವ ಪರಿಪಾತಕ್ಕೆ ಸ್ವಲ್ಪ ದಿನ ವಿರಾಮ ನೀಡಿದ್ದರು ಸಹಿತ ನಾನು ಟೀವಿ ನೋಡುವುದು ಬಿಟ್ಟಿರಲಿಲ್ಲ ಬಿಡಿ . ಆದರೆ ನನ್ನನ್ನು ತುಂಬಾ ಕಾಡಿದ್ದು, ಪತ್ರಕರ್ತ ಶರತ್ ಕುಮಾರ್ ಸಾವು. ಶಶಿಧರ್ ಭಟ್ ಅವರು ಶರತ್ ಸಾವಿನ ಬಗ್ಗೆ ಬರೆದಾಗ ಹೆಚ್ಚು ನೋವಾಗಿತ್ತು. ಬೆಳಕಿನಲ್ಲಿ ಕುಳಿತು ಫಳಫಳ ಎಂದು ಹೊಳೆಪಿನ ಮುಖ ಹೊತ್ತು, ಕಿಲಕಿಲ ಎಂದು ನಗುವ ಆಂಕರ್ ಗಳು, ಪತ್ರಕರ್ತರು, ತೆರೆಯ ಹಿಂದೆ ಕೆಲಸ ಮಾಡುವ ನನ್ನ ಅನೇಕಾನೇಕ ಗೆಳೆಯರು-ಗೆಳತಿಯರು ಇವರಲ್ಲಿ ಬಹುತೇಕರ ಪಾಡು ಹಿಂಗೆ!!
ಯಾರೋ ದುಡ್ಡು ಮಾಡಿರ ಬಹುದು, ಆದರೆ ಬಹಳಷ್ಟು ಜನ ಮೀಡಿಯ ಮಂದಿ ಸ್ಥಿತಿ ಹೇಳಿಕೊಳ್ಳುವಂತಿಲ್ಲ . ನನ್ನ ಅಮ್ಮನ ಬಳಿ ಈ ವಿಷಯ ಮಾತಾಡುತ್ತಾ, ಇದ್ದರೆ ಸ್ವಲ್ಪ ದಿನ ಇದರಲ್ಲಿ ಉಳೀತಿನಿ ,ಆಮೇಲೆ ಬೇರೆ ಉದ್ಯೋಗ ಮಾಡ್ತೀನಿ ಸಾಕಾಯ್ತು ಎಂದು ಹೇಳುವುದು ಇತ್ತೀಚಿಗೆ ಜಾಸ್ತಿ ಆಗಿದೆ ನನ್ನ ಕಡೆಯಿಂದ. ರೋಸುತ್ತೆ ಕಣ್ರೀ ಇಲ್ಲಿನ ವಾತಾವರಣ!!
@ ಈಟಿವಿ ನ್ಯೂಸ್ ನಲ್ಲಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಎದೆತುಂಬಿ ಹಾಡಿದೆನು ಕಾರ್ಯಕ್ರಮ ಮತ್ತೆ ಆರಂಭವಾಗಿದೆ. ಆದರೆ ಅದನ್ನು ನೋಡಲು ಸಾಧ್ಯವಿಲ್ಲ, ಯಾಕೇಂದ್ರೆ ಆ ಚಾನೆಲ್ ನಮ್ಮ ಮನೇಲಿ ಬರಲ್ಲ :-). ಎಂತಹ ವಿಷಾದ ಅಲ್ವೇನ್ರಿ! ಬೇರೆ ಭಾಷೆಯಲ್ಲಿ ಯಾವ ಚಾನೆಲ್ ಆರಂಭವಾಗಲಿ ಲಬಕ್ ಅಂತ ಸೇವೆ ನೀಡುತ್ತೆ . ಆದರೆ ಕನ್ನಡದಲ್ಲಿ ಅದೆಷ್ಟು ನ್ಯೂಸ್ ಚಾನೆಲ್ಗಳು ಆರಂಭವಾಗಿದೆ. ಆದರೆ ಬರೋದು ಮಾತ್ರ ಆ... ಒಂದು ... ಆ ಎರಡು ... ಆ ಮೂರು !!
@ ಕಲರ್ ಕನ್ನಡ ವಾಹಿನಿಯಲ್ಲಿ ವಿ ರವಿಚಂದ್ರನ್ ಅವರ ನೇತೃತ್ವದ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ಗೆ ಟ್ರೋಫಿ ಬಂದಿದ್ದು ಖುಷಿ ಅನ್ನಿಸಿತು. ಆದರೆ ಅದಕ್ಕಿಂತ ನನಗೆ ಖುಷಿ ಆಗೋ ಸಂಗತಿ ಅಂದ್ರೆ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಆರಂಭವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಹೊಸಬರು ಅಂದ್ರೆ ಸೆಲೆಬ್ರಿಟಿಗಳು ಅಲ್ಲದವರು ಇದ್ದಾರೆ ಚಂದ . ಅಂತಹ ಪ್ರತಿಭೆಗಳ ಡ್ಯಾನ್ಸ್ ಅಥವಾ ಇನ್ಯಾವುದೇ ಕಾರ್ಯಕ್ರಮ ನೋಡಲು ನನಗಿಷ್ಟ .
@@ ಸುವರ್ಣ ಮನೋರಂಜನೆ ವಾಹಿನಿಯಲ್ಲಿ ಪುಟಾಣಿ ಪಂಟ್ರು ಎನ್ನುವ ಕಾರ್ಯಕ್ರಮ ಬರ್ತಾ ಇದೆ. ಅದರಲ್ಲಿ ಮಿತ್ರ ನಿರಂಜನದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ.ಅದರಲ್ಲಿ ಗುರು ಪ್ರಸಾದ್, ರಕ್ಷಿತಾ ಮತ್ತು ಮಾಸ್ತರ್ ಸುಂದರಂ ಅವರು ತೀರ್ಪುಗಾರಾಗಿದ್ದಾರೆ. ಚಂದದ ಕಾರ್ಯಕ್ರಮ. ಬಹಳ ದಿನಗಳ ಬಳಿಕ ನನಗೆ ನಿರಂಜನ ಅವರನ್ನು ಟೀವಿ ಪರದೆ ಮೇಲೆ ಅಂದ್ರೆ ರಿಯಾಲಿಟಿ ಶೋ ಮೂಲಕ ನೋಡುವ ಅವಕಾಶ. ಜಾಲಿ ಬಾಯ್ ,ರೇಡಿಯೋ ಜಾಕಿ ಆಗಿದ್ದಾಗ, ಜೀ ಕನ್ನಡದಲ್ಲಿ ವಿದೇಶಕ್ಕೆ ಹೋಗಿ ಕಾರ್ಯಕ್ರಮ ನಡೆಸಿ ಕೊಡುವಾಗಲು ಇಷ್ಟ ಆಗಿತ್ತು. ಈಗ ಹೀರೋ ಆಗಿದ್ದಲ್ಲದೆ ಕನ್ನಡಿಗರಿಗೆ ಹೆಚ್ಚು ಗೊತ್ತಾಗಿದ್ದಾರೆ ನಿರಂಜನ್ . ವೆಲ್ ಅವರ ವಿಷಯ ಪಕ್ಕಕ್ಕೆ ಇಡೋಣ ಒಟ್ಟಾರೆ ಅತ್ಯಂತ ಖುಷಿ ಕೊಡುವ ಕಾರ್ಯಕ್ರಮ ಇದು. ಗುರು ನಿರ್ದೇಶನ ಬಿಟ್ಟು ಜಡ್ಜ್ ಆಗಿ ಸೇಫರ್ ಸೈಡ್ ನಲ್ಲಿದ್ದಾರೆ.
No comments:
Post a Comment