ಕಿಲಕಿಲ

 
ಕಲರ್ ಹಿಂದಿ ವಾಹಿನಿಯಲ್ಲಿ ಪ್ರತಿ ಶನಿವಾರ ರಾತ್ರಿ ಒಂದು  ಕಾಮಿಡಿ ಕಾರ್ಯಕ್ರಮ ಪ್ರಸಾರವಾಗುತ್ತದೆ. ಬಚಾವ್ .. ಬಚಾವ್.. ಎಂದು ಓಡುವಂತೆ ಮಾಡಲ್ಲ ಕಾರ್ಯಕ್ರಮ, ಆದರೆ ಆ ಬಚಾವ್ ನಿಂದ ತಪ್ಪಿಸಿಕೊಳ್ಳ ಬೇಕೆಂದರೆ  ಸಾಕಷ್ಟು ಪರದಾಡಬೇಕು. ಅಂತಹ ಬಚಾವ್ ಕಾರ್ಯಕ್ರಮ   ಹಾಸ್ಯಭರಿತವಾಗಿರುವಂತಹದ್ದು, ಸೆಲೆಬ್ರಿಟಿಗಳ ಕಾಲನ್ನು ಸರಿಯಾಗಿ ಎಳೆದಾಡುವಂತಹ ವಿಭಿನ್ನ ಕಾರ್ಯಕ್ರಮ ಬಚಾವ್. ಒಂದು ಹಿಡಿ ಕಲಾವಿದರು ಆ ಕಾರ್ಯಕ್ರಮಕ್ಕೆ ಬರುವ ಸೆಲೆಬ್ರಿಟಿಗಳನ್ನು ತಮ್ಮದೇ ಆದ ಶೈಲಿಯಲ್ಲಿ  ತಮಾಷೆ ಮಾಡುತ್ತಾರೆ  . ಇದು ಭಿನ್ನವಾದ ಕಾರ್ಯಕ್ರಮ, ಕೃಷ್ಣ, ಭಾರತಿ ಸೇರಿದಂತೆ ಹಲವಾರು ಕಲಾವಿದರು ಅದರಲ್ಲಿ ಇದ್ದಾರೆ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಮಾಡುವ ಮಂದಿಗೆ ಬಹಳ ಎಚ್ಚರಿಕೆ ಇರಬೇಕು ಏಕೆಂದರೆ ಸೆಲೆಬ್ರಿಟಿಗಳಿಗೆ ಯಾವಾಗ ಕೋಪ ಬರುತ್ತೋ ಗೊತ್ತಿಲ್ಲ.. ಅಂತಹ ಕೋಪ ಬರೋದು ಕರ್ನಾಟಕದಲ್ಲಿ ಮಾತ್ರ ಎಂದು ಕಾಣುತ್ತದೆ. ಯಾಕೆ ಈ ಮಾತು   ಹೇಳ್ತಾ ಇದ್ದೀನಿ ಎಂದರೆ ಬಹಳ ಹಿಂದೆ ನನ್ನ ಬ್ಲಾಗ್ ನಲ್ಲಿ ರೇಡಿಯೋ ಜಾಕಿಗಳ ಬಗ್ಗೆಯೂ ಬರೆಯುತ್ತಿದ್ದೆ. ಆ ಸಮಯದಲ್ಲಿ ರೇಡಿಯೋ ಜಾಕಿ ರೋಹಿತ್ ಸ್ಯಾಂಡಲ್ ವುಡ್ ನ ಕಲಾವಿದರ ಬಗ್ಗೆ ಒಂದು ಕಾರ್ಯಕ್ರಮ ನಿರೂಪಿಸುತ್ತಿದ್ದರು. ಆತನ ಮಾತಿನ ಶೈಲಿ , ಆ ತುಂಟತನಕ್ಕೆ ಸಿಟ್ಟಿಗೆದ್ದ ಸಿನಿಮಂಡಿ ಪಾಪದ ಜಾಕಿ ಮೇಲೆ ಕೆಂಗಣ್ಣು ಬಿಟ್ಟು ಆತನ  ಕೆಲಸಕ್ಕೆ ಕುತ್ತು ಬಂದಿತ್ತು. ಆ  ಸಮಯದಲ್ಲಿ ನನ್ನ ಬ್ಲಾಗ್ ಅವಧಿಯಲ್ಲಿ ಸಹಿತ ಪ್ರಕಟ ಆಗ್ತಾ ಇತ್ತು. ಆನಂತರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ  ಬಿಟ್ಟಿದ್ದು ತಪ್ಪು ಎಂದು ಅವರು ಸಿಟ್ಟಿನಿಂದ ಹೊರ ಬಂದು ಮತ್ತೆ ರೋಹಿತ್ ಗೆ ಅವಕಾಶ ನೀಡಿದ್ದರು. ರೋಹಿತ್ ಬಗ್ಗೆ ಬರೆದ ಆ ಲೇಖನದ ಸಾಕಷ್ಟು ಜನರನ್ನು ಸೆಳೆದಿತ್ತು. ಇವೆಲ್ಲ ಹಳೆಯ ಕಥೆ. ಬಚಾವ್ ಹೆಸರಿನ ಕಾರ್ಯಕ್ರಮ ವೀಕ್ಷಿಸಿದಾಗ ನೆನಪಿಗೆ ಬಂತು.
@ ಮೊನ್ನೆ ಈ ಟೀವಿ  ಕನ್ನಡ ನ್ಯೂಸ್ ವೀಕ್ಷಿಸುತ್ತಿದೆ. ಅದರಲ್ಲಿ ಇನ್ನು ಸ್ವಲ್ಪ ಹೊತ್ತಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಯಶ್ರೀ ಅವರ ಜೊತೆ ಮಾತುಕತೆ ಎನ್ನುವ ಅರ್ಥದಲ್ಲಿ ಒಂದು ಸಾಲು ಕೆಳಗೆ ಹರಿದು ಬರುತ್ತಿತ್ತು. ಸರಿ ಆ ಹೆಣ್ಣುಮಗಳು ಏನು ಮಾತಾಡುತ್ತಾರೋ ಎಂದು ನೋಡುವ ಅಂತ ಕಾಯ್ತಾ ಇದ್ದೆ. ಆ ಕಾರ್ಯಕ್ರಮ ಆರಂಭವಾಯ್ತು. ಅದನ್ನು ಕಿಲಕಿಲನೆ ಮಾತನಾಡುವ ಆಂಕರ್ ಮೀನ ಅವರು ನಡೆಸಿಕೊಟ್ಟರು. ಈ ಹೆಣ್ಣುಮಗಳು ವಾಟ್ಸಪ್ ಗ್ರೂಪ್ ಒಂದರಲ್ಲಿ ನನಗೆ ಅಲ್ಪಕಾಲ ಮಿತ್ರೆ ಆಗಿದ್ದರು. ಅಲ್ಲಿ ಸಹ ಕಿಲಕಿಲ ಅಂತ ಇರುತ್ತಿದ್ದರು. ಒಮ್ಮೆ ನಾನು ಪುದೀನ ಜೂಸ್ ಚಿತ್ರ ಹಾಕಿದ್ದೆ, ನನಗೆ ಎಂದು ಕೇಳಿದ್ದರು, ಮನೆಗೆ ಬನ್ನಿ ಕೊಡುವೆ ಎಂದಿದ್ದೆ. ಪ್ರತಿಬಾರಿ ಮೀನ ಆ ಗುಂಪಿಗೆ ಬಂದಾಗಲು ಕಿಲಕಿಲ ಅಂತಾ ಇರ್ತಾ ಇತ್ತು. ಅಷ್ಟೊಂದು ಜೀವಂತಿಕೆ ಇರುವ ಈ ಆಂಕರ್ ಕಾರ್ಯಕ್ರಮವು  ಸಹ ಕಿಲಕಿಲ .. ಆದರೆ ಆಕೆಯ ಮಾತು ಹೆಚ್ಚು ಕೇಳೋಕೆ ಆಗಲಿಲ್ಲ , ಯಾಕೇಂದ್ರೆ ಅಂದು  ಕಿಲಕಿಲನೆ ಮಳೆ ಸುರಿಯಲು ಆರಂಭಗೊಂಡು ನಮ್ಮ ಟೀವಿ ಪರದೆ ಕರ್ ಅಂತ ಅನ್ನೋಕೆ ಶುರು ಆಯ್ತು.. :-)
 

No comments: