ಎನ್ಕರೇಜ್ ...

Image result for red flowers
ಬ್ಲಾಗ್ ಬರೆಯೋಕೆ ಆರಂಭಿಸಿ ಸುಮಾರು ಹತ್ತು ವರ್ಷಗಳು ಕಳಿದಿವೆ. ಆರಂಭದಿಂದಲೂ ನಾನು ಟೀವಿ ಮಾಧ್ಯಮದ ,ಅದರ ಕಾರ್ಯಕ್ರಮಗಳ ಬಗ್ಗೆ ಬರೆಯುತ್ತಾ ಬಂದಿದ್ದೇನೆ. ಆರಂಭದಲ್ಲಿ ನನಗೆ ನನ್ನ ಬ್ಲಾಗ್ ಹೆಚ್ಚು ಮಂದಿ ಓದಲಿ ಅನ್ನುವ ಆಸೆ  ಸಹಜವಾಗಿ ಇತ್ತು.. ಅದಕ್ಕಾಗಿ ಮಾಡಿದ ಕಸರತ್ತು ಅಷ್ಟಿಷ್ಟಲ್ಲ.. ಬ್ಲಾಗ್ ಅಂದ ಹೆಚ್ಚಿಸುವ ನಿಟ್ಟಿನಲ್ಲಿ  ಆಗ ನನ್ನ ಕಲೀಗ್ ಗಳು -  ವಿನ್ಯಾಸಕಾರರು ಆಗಿದ್ದ ಸತೀಶ್ ಕುಮಾರ್ ಮತ್ತು ಮಹಂತೇಶ್  ಇಬ್ಬರ ತಲೆ ತಿಂದು  ಅದರ ಬಗ್ಗೆ ಚರ್ಚಿಸುವುದು ಆಗಿನ ಬಹು ಮುಖ್ಯ ಕೆಲಸಗಳಲ್ಲಿ ಒಂದಾಗಿತ್ತು. ನನ್ನ ಬ್ಲಾಗ್ ನ ಆರಂಭ ಕಾಲದಲ್ಲಿ ಸುದ್ದಿ ಟೀವಿಯ ಎಡಿಟರ್ ಇನ್ ಚೀಫ್ ಆಗಿರುವ ಶಶಿಧರ್ ಭಟ್ ಅವರು ಸುವರ್ಣ ವಾಹಿನಿಯಲ್ಲಿದ್ದರು. ಅವರ ರಾಜಕೀಯ ವಿಶ್ಲೇಷಣೆ , ಸುದ್ದಿಯ ಸವಿಯು ಸಾಮಾನ್ಯರಿಗೆ     ತಿಳಿಯುವಂತೆ ಮಾಡಿದ ಅಗ್ಗಳಿಕೆ ಭಟ್ರಿಗೆ ಸೇರುತ್ತದೆ. ಆನಂತರ ಅವರು ಸುವರ್ಣ ನ್ಯೂ ಸ್  ಗೆ ಮುಖ್ಯಸ್ಥರಾಗಿದ್ದಾಗ ಅವರ ಕಮ್ರಿ ಬ್ಲಾಗ್ ಮೂಲಕ  ನನಗೆ ಪರಿಚಿತರಾದರು.. ಫೇಸ್ ಬುಕ್  ಫ್ರೆಂಡ್  ಸಹ  ಸರ್  ಆಗಿದ್ದಾರೆ. :-)  ವಿಷಯ ಅದಲ್ಲ  ನಾನು ಬ್ಲಾಗ್ ಲೋಕಕ್ಕೆ ಅಡಿ ಇಟ್ಟ  ಆರಂಭದಲ್ಲಿಯೇ  ಶಶಿ ಸರ್ ನನ್ನ ಪೋಸ್ಟ್ ಗಳಿಗೆ  ಪ್ರತಿಕ್ರಿಯೆ ಬರೆಯುತ್ತಿದ್ದರು. ನಾವು ನಿಮ್ಮ ಬ್ಲಾಗ್ ನೋಡೇ ಇಲ್ಲ, ನಿಮ್ಮ ಬರಹಗಳ ಬಗ್ಗೆ ಗೊತ್ತೇ ಇಲ್ಲ  ಎನ್ನುವ ಕಾಲದಲ್ಲಿ ಅವರು ನೀಡಿದ  ಎನ್ಕರೇಜ್ ಮರೆಯಲಾಗದ್ದು..ಅಂತಹ ಕಾಲದಲ್ಲಿ  ಪ್ರತಿಷ್ಠಿತ ಚಾನೆಲ್ ಮುಖ್ಯಸ್ಥರು ಕಮೆಂಟ್ ಬರೆಯೋದು ಅಂದ್ರೆ ಸರಳವಾದ ಸಂಗತಿ ಅಲ್ಲವೇ ಅಲ್ಲ. ಪತ್ರಕರ್ತರು  ಕೆಲಸದಲ್ಲಿ ಇರೋದು ಎಷ್ಟು ಸತ್ಯವೋ ಕೆಲಸ ಕಳೆದು ಕೊಳ್ಳುವುದು ಅಷ್ಟೇ ಸತ್ಯ.. [ಈಗ ನಾನು ನಿರುದ್ಯೋಗಿ ಪರ್ವದಲ್ಲಿ ಇದ್ದೇನೆ.. ಹೋಪ್ ಫಾರ್ ಬೆಸ್ಟ್ ನನ್ನ ಪ್ರತಿಭೆ ಯಿಂದ ಅಲ್ಲದಿದ್ದರೂ ಈ ರಂಗದಲ್ಲಿ ನಾನು ಪಟ್ಟ ಶ್ರಮದ ಪ್ರತಿಫಲವಾಗಿ ನನಗೂ ಕೆಲಸ ಸಿಗಬಹುದೇನೋ :-) ]
ನಮ್ಮ ಭಟ್ರು ಸಹ ತಮ್ಮ ವೃತ್ತಿ ಬದುಕಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ.ಅವರು ನಿರುದ್ಯೋಗ ಪರ್ವಕಾಲದ ಸವಿ ಬೇಕಾದಷ್ಟು ಸವಿದಿದ್ದಾರೆ :-).. ಈಗ ಅವರು  ಸುದ್ದಿ ಟೀವಿ ಚೀಫ್  ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ..
ನನ್ನ ಬ್ಲಾಗ್ ಓದಿ ಅದಕ್ಕೆ ಕಮೆಂಟಿಸಿದ್ದ ಶಶಿ ಸರ್ ಬಗ್ಗೆ ನಾನು ಸದಾ ಕೃತಜ್ಞಳಾದ್ದೇನೆ.. ಅವರು ಪ್ರಗತಿಪರರು-ಚಿಂತಕರು, ಆದರೇ ಅವ್ಯಾವುದೂ ನಾನು ಅಲ್ಲ ಆದರೇ ಅವರ ಬರಹಗಳಲ್ಲಿನ ಸಂವೇದನೆ ಮನಕ್ಕೆ ಖುಷಿ ಕೊಡತ್ತದೆ.. ಇತ್ತೀಚೆ ಗೋ ಹತ್ಯ ನಿಷೇಧ ಕಾಯ್ದೆ  ಜಾರಿಯಾದ ಸಮಯದಲ್ಲಿ , ಅದರಲ್ಲೂ  ಶಶಿ ಸರ್ ಇತ್ತೀಚಿನ  ಬರಹಗಳಲ್ಲಿ ನನಗೆ  ಹೆಚ್ಚು ಆಪ್ತವಾಗಿದ್ದು.....

ನನ್ನ ಅಮ್ಮ ತನ್ನ ಇದುವರೆಗಿನ ಬದುಕಿನಲ್ಲಿ ಅತಿ ಹೆಚ್ಚು ಸಮಯ ಕಳೆದಿದ್ದು ಕೊಟ್ಟಿಗೆಯಲ್ಲಿ. ಅವಳಿಗೆ ಕೊಟ್ಟಿಗೆಯೆ ಮನೆ. ಆಕೆ ಕೊಟ್ಟಿಗೆಯಲ್ಲಿರುವ ಹಸು ಕರುಗಳ ಜೊತೆ ಮಾತನಾಡುತ್ತಾಳೆ, ಆಕೆ ಹೇಳಿದ್ದು ಹಸು ಕರುಗಳಿಗೆ ಅರ್ಥವಾಗುತ್ತಿದೆಯೋ ಇಲ್ಲವೋ, ಆದರೆ ಹಸು ಕರುಗಳ ಭಾಷೆ ಅವಳಿಗೆ ಅರ್ಥವಾಗುತ್ತದೆ. ನಿನ್ನೆ ರಾತ್ರಿ ನಾನು ಪ್ರೈಮ್ ನ್ಯೂಸ್ ಮಾಡುತ್ತಿದ್ದೆ. ಅಮ್ಮ ಟೀವಿಯ ಮುಂದೆ ಕುಳಿತಿದ್ದಳು. ಅವಳಿಗೆ ಪ್ರತಿ ದಿನ ಮಗನನ್ನು ನೋಡುವುದು ತುಂಬಾ ಸಂತೋಷದ ಕೆಲಸ. ಆಗಲೇ ಕೊಟ್ಟಿಗೆಯಲ್ಲಿದ್ದ ಅವಳ ಮಗಳಿಗೆ ಆರೋಗ್ಯ ಕೈ ಕೊಟ್ಟಿತು. ಅಮ್ಮ ಅವಳಿಗೆ ಬೆಲ್ಲ ನೀಡಿದಳಂತೆ. ಬೆಲ್ಲ ತಿಂದು ಸ್ವಲ್ಪ ಹೊತ್ತಿಗೆ ಆಕೆ ಅಸು ನೀಗಿದಳು. ನನ್ನ ನ್ಯೂಸ್ ಮುಗಿಯುವ ಹೊತ್ತಿಗೆ ಅಮ್ಮ ದುಃಖದಲ್ಲಿದ್ದಳು. ಅವಳ ಕಣ್ಣಲ್ಲಿ ನೀರು. ನಾನು ಫೋನ್ ಮಾಡಿ ಸಮಾಧಾನ ಹೇಳಿದೆ. ಅಯ್ಯೋ ಏನು ಮಾಡುವುದು ಬಿಡೋ. ಆಕೆಯೂ ಮಕ್ಕಳನ್ನು ಕಂಡಳು. ಮೊಮ್ಮಕ್ಕಳನ್ನು ಕಂಡಳು. ವಯಸ್ಸಾಗಿದ್ದರೂ ಅವಳನ್ನು ಕಳುಹಿಸುಕೊಡಲು ನಾನು ಸಿದ್ಧನಿರಲಿಲ್ಲ. ಅಮ್ಮ ದುಃಖದಲ್ಲೇ ಇದ್ದಳು. ಅವಳು ಅಳುತ್ತಿರುವುದು ೪೦೦ ಕಿಲೋ ಮೀಟರ್ ದೂರದಲ್ಲಿರುವ ನನಗೆ ಕಾಣುತ್ತಿತ್ತು.

No comments: