ನಮ್ಮ ಊರು ಬೆಂಗಳೂರು


ಅತ್ಯಂತ  ಸುಂದರ ಕಾರ್ಯಕ್ರಮ ಕಾರ್ಯಕ್ರಮಗಳಲ್ಲಿ ಜನಶ್ರೀ ಯಲ್ಲಿ ಪ್ರಸಾರ ಆಗುವ ಸುರೇಶ  ಮುನಾ  ಬೆಂಗಳೂರು ಇದು ನಮ್ಮ ಊರು ಸಹ ಒಂದು .ಹೇಗಿತ್ತು ಹೇಗಾಯ್ತು ಈ ನಮ್ಮ ಊರು ಅಂತ ಒಂದು ಬಾರಿ ಯೋಚಿಸಿದರೆ ಒಹ್ ! ಕೆಲವು ಸ್ಥಳಗಳಲ್ಲಿ ಅನಾವಶ್ಯಕವಾಗಿ ಎದ್ದಿರುವ ಆ ಫ್ಲೈ ಓವರ್ ಗಳು ಆ ಸ್ಥಳಗಳ ಸೌಂದರ್ಯವನ್ನೇ ದೂರ ಮಾಡಿದೆ. ನ್ಯಾಷನಲ್ ಕಾಲೇಜ್ ಇರುವ ಜಾಗ ,ಅದರ ಜೊತೆಗೆ ಮಿಳಿತವಾಗಿರುವ  ಇತಿಹಾಸ, ಸುಂದರ ನೆನಪುಗಳಿಗೆ ಪರದೆ ಹಾಕಿದಂತೆ ಎದ್ದಿರುವ ಆ ಸೇತುವೆ .. !ಪ್ರತಿ ಎಪಿಸೋಡ್ ನೋಡುವಾಗಲು ನನಗೆ ತುಂಬಾ ದುಃಖ ಆಗುತ್ತೆ ಹಳೆಯ ಬೆಂಗಳೂರು ನೆನಪಿಸಿಕೊಂಡರೆ 
ಈ ಭಾವನೆಗೆ ಪೂರಕಆಗುವಂತೆ  ಮಿತ್ರ ಪಲವಳ್ಳಿ  ಬದರಿನಾಥ್ ಕವನ ಇಲ್ಲಿ ಅಂಟಿಸಿದ್ದೇನೆ.ಅನೇಕ ವಾಹಿನಿಗಳಲ್ಲಿ ಕ್ಯಾಮರ ನಿರ್ವಹಣೆ ಬದುಕು ನಡೆಸುತ್ತಿರುವ ಕವಿ ಮನಸಿನ ಭಾವುಕ ಗೆಳೆಯ ಬದರಿ ಈಗ  ಸುವರ್ಣ ನ್ಯೂಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತೋಚಿದ್ದು ಬರೆದೆ ಅನ್ನುವ ಈ ವಿನಮ್ರ ಗೆಳೆಯ ತೋಚಿದ್ದು ಬರೆದು ಓದುಗರ ಮನಸ್ಸು ಬಾಚಿದ್ದಾರೆ..ಕವನ ಓದಿ ನಿಮಗೆ ಅರ್ಥ ಆಗುತ್ತೆ.. 


ಯಾವುದೀ ಓಘ? ಹುಚ್ಚು ಆವೇಗ?
ಎತ್ತ ಸಾಗಿದೆ ಪ್ರಿಯೇ! ಬೆಂಗಳೂರು...

ರಾಯರಾಳ್ವಿಕೆಯಲಿ ರಾಶಿ ಲೆಕ್ಕದಲಿ
ವಜ್ರ ವೈಢೂರ್ಯ ರತ್ನಾದಿಗಳು,
ನನ್ನ ಕಾಲಕೆ; ಕಳ್ಳೇ ಕಾಯಿ ಪರಿಷೆಯಲಿ
ಪ್ರದ್ಯುಮ್ನ ಬಾಣಕ್ಕೆ ಸಿಕ್ಕ ಪದ್ಮ ಮೀನಾಕ್ಷಿಯರು!

ರಸಿಕ ಮಣಿಗಳಿಗೆ ಕೆಂಪೇಗೌಡ ಹಿಮಾಲಯ
ಸಭ್ಯರಿಗೆ! ರಾಜ್ಕುಮಾರ್ ವಿಷ್ಣು ಅಂಬಿ ರಮೇಶ
ಇಷ್ಟ ದೇವತಾ ಕ್ಯಾಲಂಡರಿನ ಹಿಂದೆ
ಸಿಲ್ಕು ಡಿಸ್ಕೋ ಮುಲುಕೋ ಜನ್ಮಸ್ಥ ಉಡುಗೆ!

ಊರಗಲವಿದ್ದ ಮಸಾಲೆ ದೋಸೆ ಕಾಸಗಲ
ನಲ್ಲಿ ನೀರಿಗೂ ಬ್ರಾಂಡಿನ ಬಿರುಡೆ
ಸುರಿದ ಮಳೆ, ಒಂಥರಾ ಹೆಂಡತಿ ಉಪದೇಶ
ರಾಜ ಕಾಲುವೆಗಳೆಲ್ಲ ಒತ್ತುವರಿ ಈಗ!

ದಮ್ಮು ರಮ್ಮು ಲಲನೆಯಕೂಡ, ಎಲ್ಲಿಂದಲೋ ಬಂದವರಿಗೆ
ಅಫೀಮು ಗಾಂಜ ಲೈವ್ ಬ್ಯಾಂಡುಗಳ ತೆವಲು
ನೂರ ತೊಂಬತ್ತೆಂಟು ಹುತ್ತಗಳಲೂ ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೇ ನಾವು ನಿಂತ ಪಯಣಿಗರು...

ನಗರ ಭೂಪಟಕೀಗ ಆನೆ ಕಾಲು ರೋಗ
ನನ್ನ ಪ್ರಾರಬ್ಧ ಕರ್ಮಕೆ
ಈಕೆ ಗತ ತ್ರಿಪುರ ಸಿಲಿಕಾನ್ ಸುಂದರಿ...


1 comment:

Badarinath Palavalli said...

ಧನ್ಯೋಸ್ಮಿ ಗೆಳತಿ,

ಇದು ಹೂವಿನ ಜೊತೆ ನಾರನ್ನೂ ಸ್ವರಗಕ್ಕೆ ಏರಿಸುವ ಹೂವಾಡಗಿತ್ತಿಯ ನಿಸ್ವಾರ್ಥ ಪ್ರೀತಿಯ ಕಾಣಿಕೆ.

ಅಂದಹಾಗೆ, ನೀವು ಬರೆದಂತ ಬಸವನಗುಡಿ ನ್ಯಾಷನಲ್ ಕಾಲೇಕು ನಾನು ಓದಿದ ಕಾಲೇಜು!